ಮಹೀಪಾಲ - 
ಈ ಹೆಸರಿನ ರಾಜರು ಅನೇಕರಿದ್ದಾರೆ : ಬೇರೆ ಬೇರೆ ವಂಶದವರು.

	ಗೂರ್ಜರ ಪ್ರತೀಹಾರ ವಂಶದ ಒಂದನೆಯ ಮಹೀಪಾಲ: 10ನೆಯ ಶತಮಾನದಲ್ಲಿ ಬಾಳಿದ ರಾಜ. ತಂದೆ ಮಹೇಂದ್ರಪಾಲ ಮತ್ತು ತಾಯಿ ಮಹಾದೇವಿ ಅಥವಾ ಮಹೀದೇವಿ. ವಿನಾಯಕಪಾಲ, ಕ್ಷಿತಿಪಾಲ ಹಾಗೂ ಹೇರಂಬಪಾಲ ಎಂಬ ಹೆಸರುಗಳೂ ಈತನಿಗಿದ್ದವೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಮಹೇಂದ್ರಪಾಲನ ಮರಣಾನಂತರ ಆತನ ಮಕ್ಕಳಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆದು, 912ರ ಸುಮಾರಿಗೆ ಮಹೀಪಾಲ ಪಟ್ಟವೇರಿದ. ಉತ್ತರದಲ್ಲಿ ಕುಲೂಟದಿಂದ ದಕ್ಷಿಣದಲ್ಲಿ ಕೇರಳದ ವರೆಗಿನ ದೂರದ ಪ್ರದೇಶವನ್ನೆಲ್ಲ ಈತ ಆಕ್ರಮಿಸಿದ್ದನೆಂದು ರಾಜಶೇಖರ ಕವಿ ಉತ್ಪ್ರೇಕ್ಷಿಸಿದ್ದಾನೆ. 915ರ ಸುಮಾರಿಗೆ ಈತನ ಆಸ್ಥಾನಕ್ಕೆ ಭೇಟಿಕೊಟ್ಟ ಬಾಗದಾದಿನ ಅಲ್-ಮಸೂದಿ ಅರಸನ ಸೇನಾಬಲವನ್ನು ಉಲ್ಲೇಖಿಸಿದ್ದಾನೆ.

	ರಾಷ್ಟ್ರಕೂಟ ರಾಜ ಮುಮ್ಮಡಿ ಇಂದ್ರ 915-918ರ ನಡುವೆ ಪ್ರತೀಹಾರ ಸಾಮ್ರಾಜ್ಯದ ಮೇಲೆ ಆಕ್ರಮಣ ನಡೆಸಿ ಕನೌಜಿಗೆ ಮುತ್ತಿಗೆ ಹಾಕಿದ. ಚಂದೇಲ ವಂಶದ ಹರ್ಷನ ನೆರವಿನಿಂದ ಮಹೀಪಾಲ ಮತ್ತೆ ಕನೌಜನ್ನು ಕೈವಶಪಡಿಸಿಕೊಂಡ. ಕಲಚುರಿ ಭಾಮನದೇವನ ಸಹಾಯದಿಂದ ಮಾಳವವನ್ನು ಪರಮಾರರಿಂದ ಪಡೆದುಕೊಂಡ. 931ರ ವೇಳೆಗೆ ಈತನ ರಾಜ್ಯ ಪಶ್ಚಿಮದಲ್ಲಿ ಸೌರಾಷ್ಟ್ರ, ಪೂರ್ವದಲ್ಲಿ ವಾರಾಣಸಿ ಹಾಗೂ ದಕ್ಷಿಣದಲ್ಲಿ ಚಂದೇರಿಯವರಿಗೆ ವಿಸ್ತರಿಸಿತ್ತು.

	ಪಾಲವಂಶದ ಒಂದನೆಯ ಮಹೀಪಾಲ : ಕ್ರಿ.ಶ. ಸು. 978ರಿಂದ 1030ರ ತನಕ ಆಳಿದ. ಚಂದೇಲ, ಕಲಚುರಿಗಳ ಆಕ್ರಮಣಗಳಿಗೆ ತುತ್ತಾಗಿ ಕುಸಿದು ಹೋಗಿದ್ದ ಪಾಲ ಸಾಮ್ರಾಜ್ಯದ ವೈಭವ ಪ್ರತಿಷ್ಠೆಗಳನ್ನು ಮರಳಿ ದೊರಕಿಸಿಕೊಟ್ಟ. ಕೈಬಿಟ್ಟು ಹೋಗಿದ್ದ ಬಂಗಾಲ ಹಾಗೂ ಬಿಹಾರದ ಬಹುಭಾಗವನ್ನು ವಶಪಡಿಸಿಕೊಂಡ. 1023ರ ಸುಮಾರಿಗೆ ರಾಜೇಂದ್ರಚೋಳನ ಉತ್ತರ ದಿಗ್ವಿಜಯ ಯಾತ್ರೆಯಲ್ಲಿ ಆತನನ್ನೆದುರಿಸಿ ಪರಾಜಿತನಾದ. 1026ರ ಶಾಸನವೊಂದರಲ್ಲಿ ಈತನನ್ನು ಗೌಡದೇಶಾಧಿಪತಿ ಎಂದು ಕರೆಯಲಾಗಿದೆ. ಕಲಚುರಿ ಗಾಂಗೇಯದೇವ ಕೂಡ ಪಾಲರಾಜ್ಯದ ಮೇಲೆ ಆಕ್ರಮಣ ನಡೆಸಿ ಇವನನ್ನು ಸೋಲಿಸಿದ. ಮಹೀಪಾಲ ಸಾರಾನಾಥ ಹಾಗೂ ನಾಲಂದಗಳಲ್ಲಿ ಕೆಲವು ಬೌದ್ಧ ರಚನೆಗಳನ್ನು ಕಟ್ಟಿಸಿದನಲ್ಲದೆ ಕೆಲವನ್ನು ಜೀರ್ಣೋ ದ್ದಾರಗೊಳಿಸಿದ ಕೂಡ. ಪಾಲದೊರೆಗಳಲ್ಲಿ ದೇವಪಾಲನ ಅನಂತರ ಶ್ರೇಷ್ಠ ದೊರೆಯಾದ ಮಹೀಪಾಲನನ್ನು ಕುರಿತ ಲಾವಣಿ ಗೀತೆಗಳು ಇಂದಿಗೂ ಬಂಗಾಲದಲ್ಲಿ ಪ್ರಚಲಿತವಿದೆ ಎಂದು ಹೇಳಲಾಗಿದೆ.

	ಎರಡನೆಯ ಮಹೀಪಾಲ: 1ನೆಯ ಶತಮಾನದಲ್ಲಿ ಆಳಿದ ರಾಜ. ಪಾಲವಂಶದ ಒಂದನೆಯ ಮಹೀಪಾಲನ ಮರಿಮಗ. ತಂದೆ ವಿಗ್ರಹಪಾಲ. ವಿದೇಶೀ ಅಕ್ರಮಣಗಳಿಂದ ಪಾಲ ಸಾಮ್ರಾಜ್ಯದ ಅಡಿಪಾಯವೇ ಅಲುಗಾಡುತ್ತಿದ್ದ ಸಂಕಷ್ಟ ಸಮಯದಲ್ಲಿ ಅಧಿಕಾರಕ್ಕೆ ಬಂದ ಈ ದುರ್ಬಲ ದೊರೆ ಅಳಿದುದು ಕೆಲವು ವರ್ಷಗಳು ಮಾತ್ರವೇ (1070-75). ಸಾಮಂತ ಅರಸರು ವಿಶೇಷವಾಗಿ ಗಯಾ ಮಂಡಲದ ವಿಶ್ವಾದಿತ್ಯ. ಡೆಕ್ಕರಿಯ ಈಶ್ವರ ಘೋಷ ಮುಂತಾದವರು ಈ ಕಾಲದಲ್ಲಿ ಪ್ರಭಾವಶಾಲಿಯಾಗಿ ಬೆಳೆದರು. ತನ್ನನ್ನು ವಾತ್ಸಲ್ಯದಿಂದಲೆ ಕಾಣುತ್ತಿದ್ದ ಸೋದರರಾದ ಶೂರಪಾಲ ಹಾಗೂ ರಾಮಪಾಲರನ್ನು ಮಹೀಪಾಲ ವದಂತಿಗೆ ಕಿವಿಗೊಟ್ಟು, ಸೆರೆಗೆ ತಳ್ಳಿದಾಗ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಯಿತು. ಸಾಮಂತರು ಸಂಚುಹೂಡಿ ಮಹೀಪಾಲನನ್ನು ಅಧಿಕಾರದಿಂದ ಕಿತ್ತೊಗೆಯಲು ಪ್ರಯತ್ನಿಸಿದರು. ರಾಜನಿಷ್ಠ ಸಚಿವರ ಸಲಹೆಯನ್ನು ಧಿಕ್ಕರಿಸಿ. ಸುಸಜ್ಜಿತವಲ್ಲದ ಸೇನಾತಂಡದೊಡನೆ ಹೊರಟ ಮಹೀಪಾಲ ದಂಗೆಕೋರರ ವಿರುದ್ಧದ ಹೋರಾಟದಲ್ಲಿ ಸೋತುಹೋದ. ಕೈವರ್ತ ಜಾತಿಯ ದಿವ್ಯ ಅಥವಾ ದಿಮ್ವೊಕ ರಾಜನನ್ನು ಕೊಂದುಹಾಕಿದ. ಈ ಗೊಂದಲದಲ್ಲಿ ರಾಮಪಾಲ ಶೂರಪಾಲರು ಸೆರೆಯಿಂದ ತಪ್ಪಿಸಿಕೊಂಡರು. ದಂಗೆ ಅವರ ಪರವಾಗೇನೂ ನಡೆದದ್ದಲ್ಲವೆನ್ನುವುದು ಸಂಧ್ಯಾಕರನಂದಿಯ ರಾಮಚರಿತದಿಂದ ವಿದಿತವಾಗುತ್ತದೆ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ